ಎಸ್ಮಾರ್ಕ್, ಜೊಹಾನ್ ಫ್ರೀಡ್ರಿಕ್ ಆಗಸ್ಟ್ ವಾನ್ (1823-1908). 

ಕಾಳಗ ಕಳದಲ್ಲಿ ಮೊದಲ ನೆರವಿನ ಪ್ರಥಮ ಚಿಕಿತ್ಸೆ (ಫಸ್ಟ್ ಎಯ್ಡ್ ಬ್ಯಾಂಡೇಜ್) ಬಳಕೆ ಜಾರಿಗೆ ತಂದು, ಸೇನೆಯ ಶಸ್ತ್ರವೈದ್ಯದಲ್ಲಿ ಹೆಸರಾಗಿದ್ದ ಜರ್ಮನಿಯ ಶಸ್ತ್ರವೈದ್ಯ. ಕೀಲ್, ಗಟಿಂಜನ್ ವಿಶ್ವವಿದ್ಯಾನಿಲಯಗಳಲ್ಲಿ ವೈದ್ಯ ಪದವೀಧರನಾಗಿ (1848), ಡೆನ್ಮಾರ್ಕಿನೊಡನೆ ನಡೆದ ಯುದ್ಧದಲ್ಲಿ ಸೇರಿದ್ದಾಗ ಡೇನರ ಸೆರೆಗೆ ಸಿಕ್ಕಿದ್ದ. ಯುದ್ಧ ಮುಗಿದ ಮೇಲೆ ಕೀಲಿಗೆ ಹಿಂದಿರುಗಿ ಶಸ್ತ್ರವೈದ್ಯ ಪ್ರಾಧ್ಯಾಪಕನಾದ (1857). ಡೆನ್ಮಾರ್ಕ್, ಆಸ್ಟ್ರಿಯ, ಫ್ರಾನ್ಸ್ ಗಳ ಎದುರು ನಡೆದ ಕದನಗಳಲ್ಲಿ ಸುಮಾರು 6-7 ವರ್ಷ ಸನ್ ಜನರಲ್‍ನ ಪದವಿಯಲ್ಲಿ ಸೇನಾಸೇವೆಯಲ್ಲಿದ್ದ. ಅವಯವ ಒಂದರ ತುದಿಯಿಂದ ಮುಂಡದ ಕಡೆಗೆ, ಹಿಗ್ಗುವ ಅಗಲದ ಕಟ್ಟುಪಟ್ಟಿಯನ್ನು ಬಿಗಿಬಿಗಿಯಾಗಿ ಸುತ್ತುತ್ತಾ ಬಂದಾಗ ಅದರಲ್ಲಿನ ರಕ್ತವೆಲ್ಲ ಕಳೆದಂತಾಗಿಸುವುದೇ ಎಸ್ಮಾರ್ಕ್‍ನ ಕಟ್ಟುಪಟ್ಟಿಯ ಉಪಯೋಗ. ಆಮೇಲೆ ಒಂದು ತಿರುಚೊತ್ತನ್ನು (ಟೂರ್ನಿಕೆ) ಬಿಗಿದ ಮೇಲೆ, ಕಟ್ಟುಪಟ್ಟಿಯನ್ನು ಬಿಚ್ಚಿದರೂ ಅವಯವಕ್ಕೆ ರಕ್ತ ಹಿಂದಿರುಗದು. ಆಗ ಶಸ್ತ್ರಕ್ರಿಯೆ ಮಾಡುವುದು ಸುಲಭ. ಈ ವಿಧಾನವನ್ನು ಎಸ್ಮಾರ್ಕ್ ಯುದ್ಧಕಾಲದಲ್ಲಿ (1873) ಕಂಡುಹಿಡಿದ. ಸೇನೆಯಲ್ಲಿ ಕೈಗೊಳ್ಳಬೇಕಾದ ಶಸ್ತ್ರಕ್ರಿಯಾ ವಿಧಾನಗಳನ್ನು ಪುಸ್ತಕದಲ್ಲಿ ವಿವರವಾಗಿ ಬರೆದ. ಮೊದಲ ನೆರವನ್ನು (ಫಸ್ಟ್ ಎಯ್ಡ್) ಕೊಡುವ ತರಬೇತುಶಾಲೆಗಳನ್ನು ಸೈನಿಕರ ಮತ್ತು ಖಾಸಗಿ ಜನರ ಉಪಯೋಗಕ್ಕಾಗಿ ತೆರೆದ. ಮೊದಲ ನೆರವಿನ ಅವನ ಕೈಪಿಡಿಗಳು ಉತ್ತಮವಾದುವೆಂದು ಹೆಸರಾಗಿದ್ದವು. ಚಕ್ರವರ್ತಿ ಇಮ್ಮಡಿ ವಿಲಿಯಂನ ರಾಜಕುಮಾರಿಯನ್ನು ಮದುವೆಯಾದ ಮೇಲೆ ಅವನಿಗೆ ರಾಜಮನ್ನಣೆ ಸಿಕ್ಕಿತು (1877).

(ಡಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ